ಪರಮಾಧಿಕಾರ -
	ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ನ್ಯಾಯದ ಅಧ್ಯಯನದ ಪೈಕಿ ಅತ್ಯಂತ ವಾದಗ್ರಸ್ತ ಪರಿಕಲ್ಪನೆಗಳಲ್ಲಿ ಪರಮಾಧಿಕಾರವೂ ಒಂದು. ರಾಜ್ಯ, ಸರ್ಕಾರ, ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳ ಸಂಕೀರ್ಣ ಪರಿಕಲ್ಪನೆಗಳಿಗೂ ಇದಕ್ಕೂ ನಿಕಟ ಸಂಬಂಧವುಂಟು. ಉಚ್ಚತಮ ಅಧಿಕಾರ ಎಂಬುದು ಇದರ ಅರ್ಥ. ಆದರೆ ಇನ್ನೂ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಇದಕ್ಕೆ ಇಲ್ಲಿ ಆರೋಪಿಸಲಾಗಿದೆ, ಲ್ಯಾಟನ್ನಿನ ಸೂಪರ್ಯಾನಸ್ ಎಂಬುದರಿಂದ ಫ್ರೆಂಚ್‍ನಲ್ಲಿ ಸಾವೆರೇನೆಟ್ ಎಂದಾಗಿ. ಇಂಗ್ಲಿಷಿನಲ್ಲಿ ಸಾವ್‍ರಿನ್ಟಿ ಎಂದಾಗಿರುವ ಶಬ್ದದ ಅರ್ಥಕ್ಕೆ ಇದು ಸಮಾನವಾಗಿದೆ.

	16ನೆಯ ಶತಮಾನದ ಫ್ರಾನ್ಸಿನಲ್ಲಿ ದಂಗೆಯೆದ್ದ ಊಳಿಗಮಾನ್ಯ ಪ್ರಭುಗಳ ವಿರುದ್ದ ಫ್ರೆಂಚ್ ದೊರೆಯ ಅಧಿಕಾರವನ್ನು ಎತ್ತಿ ಹಿಡಿಯಲು ಜೀನ್ ಬೋಡಿನ್ ಈ ಪರಿಕಲ್ಪನೆಯನ್ನು ಪ್ರಯೋಗಿಸಿದ. ಊಳಿಗಮಾನ್ಯ ಪದ್ಧತಿಯಿಂದ ರಾಷ್ಟ್ರೀಯತೆಗೆ ಪರಿವರ್ತನೆ ಇದರಿಂದ ಸುಲಭವಾಯಿತು. ತನ್ನ ಪ್ರಜೆಗಳ ಒಪ್ಪಂದವನ್ನು ರಾಜ್ಯ ಆಧರಿಸಿದೆ; ಸರ್ವರ ಸಂರಕ್ಷೆಣೆಗೆ ಅವಶ್ಯವಾದ ಅಧಿಕಾರವನ್ನು ಅವರು ಆ ಒಪ್ಪಂದದ ಮೂಲಕ ಒಂದು ಸರ್ಕಾರಕ್ಕೆ ವಹಿಸುತ್ತಾರೆ, ಎಂಬುದಾಗಿ 17ನೆಯ ಶತಮಾನದ ಉತ್ತರಾರ್ಧದಲ್ಲಿ ಜಾನ್ ಲಾಕನೂ 18ನೆಯ ಶತಮಾನದಲ್ಲಿ ಜೀನ್ ಜಾಕ್ಯೂಸ್ ರೂಸೋನೊ ಮಂಡಿಸಿದ ವಿಚಾರಗಳು ಜನತಾ ಪರಮಾಧಿಕಾರ ಸಿದ್ಧಾಂತದ ವಿಕಾಸಕ್ಕೆ ಕಾರಣವಾದುವು. ಇದು 1776ರಲ್ಲಿ ಅಮೆರಿಕದ ಸ್ವಾತಂತ್ರ್ಯಘೋಷಣೆಯಲ್ಲಿ ಅಭಿವ್ಯಕ್ತಗೊಂಡಿತು. ಪರಮಾಧಿಕಾರ ಏಕೈಕವಾದ್ದು. ಅಖಂಡವಾದ್ದು, ಪರಭಾರೆ ಮಾಡಲಾಗದಂಥದು. ಇದು ರಾಷ್ಟ್ರಕ್ಕೆ ಸೇರಿದ್ದು. ಪರಮಾಧಿಕಾರ ತನಗೆ ಸೇರಿದ್ದೆಂದು ಯಾವುದೇ ಗುಂಪು ಅಧ್ಯಾರೋಪಿಸಿಕೊಳ್ಳುವಂತಿಲ್ಲ. ಯಾವುದೇ ವ್ಯಕ್ತಿ ಅದು ತನ್ನದೆಂದು ಹೇಳಿಕೊಳ್ಳುವಂತಿಲ್ಲ-ಎಂಬ 1791 ರ ಫ್ರೆಂಚ್ ಸಂವಿಧಾನದ ಹೇಳಿಕೆಯಿಂದ ಪರಮಾಧಿಕಾರಕ್ಕೆ ಹೊಸ ತಿರುವು ಪ್ರಾಪ್ತವಾಯಿತು. ಜನತಾ ಪರಮಾಧಿಕಾರವನ್ನು ಮೂಲಭೂತವಾಗಿ ಜನತೆ ಚಲಾಯಿಸುತ್ತದೆ ಎಂಬ ಭಾವನೆಯೊಂದಿಗೆ, ಆ ಅಧಿಕಾರವನ್ನು ಸಂಘಟಿತವಾದ ರಾಷ್ಟ್ರ ಚಲಾಯಿಸುತ್ತದೆ ಎಂಬ ಭಾವನೆ ಸೇರಿಕೊಂಡಿತು. ಪ್ರಜೆಗಳ ಅಥವಾ ರಾಜ್ಯದ ಹೆಸರಿನಲ್ಲಿ ಯಾರು ಪರಮಾಧಿಕಾರವನ್ನು ಚಲಾಯಿಸುತ್ತಾರೆ ಎಂಬ ವಿಚಾರವನ್ನು ವಿವೇಚಿಸುತ್ತ ಜಾನ್ ಆಸ್ಟಿನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋದ. ಅದು ರಾಷ್ಟ್ರದ ಸಂಸತ್ತಿನಲ್ಲಿ ನಿಹಿತವಾಗಿದೆಯೆಂದು ಅವನು ಹೇಳಿದ. ಸಂಸತ್ತು ಪರಮ ಸಂಸ್ಥೆ. ಅದು ಎಲ್ಲರನ್ನು ಬದ್ದಗೊಳಿಸುವ ಕಾನೂನುಗಳನ್ನು ಅಧಿನಿಯಮಗೊಳಿಸುತ್ತದೆ. ಆದರೆ ಸ್ವತಃ ಅದು ಆ ಕಾನೂನುಗಳಿಗೆ ಬದ್ದವಲ್ಲ. ಇಚ್ಚಾನುಗುಣವಾಗಿ ಅದು ಅವನ್ನು ಬದಲಿಸಬಹುದು. ಈ ವಿವರಣೆ ಎಲ್ಲ ಸರ್ಕಾರದ ವ್ಯವಸ್ಥೆಗಳಿಗೂ ಅನ್ವಯಿಸುವಂಥದಾಗಿರಲಿಲ್ಲ. 19ನೆಯ ಶತಮಾನದಲ್ಲಿ ಬ್ರಿಟನ್ನಿನಲ್ಲಿ ಅಸ್ತಿತ್ವದಲ್ಲಿದ್ದಂಥ ಸರಕಾರಕ್ಕೆ ಮಾತ್ರ ಇದು ಅನ್ವಯವಾಗುವಂತಿತ್ತು.

	ಆದರೆ ಈ ಭಾವನೆ ಅಮೆರಿಕದ ಸನ್ನಿವೇಶಕ್ಕೆ ಹೊಂದಿಕೊಳ್ಳುವಂಥದಾಗಿರಲಿಲ್ಲ. ಅಲ್ಲಿಯ ಸಂವಿಧಾನದಲ್ಲಿ ರಾಷ್ಟ್ರೀಯ ವಿಧಾನಮಂಡಲಕ್ಕೆ ಪರಮ ಅಧಿಕಾರವನ್ನು ನೀಡಲಿಲ್ಲ. ಅದಕ್ಕೆ ಪ್ರಮುಖ ನಿರ್ಬಂಧಗಳನ್ನು ವಿದಿಸಿತು. ಕಾನೂನುಗಳನ್ನು ಅಸಂವೈಧಾನಿಕವೆಂದು ಘೋಷಿಸಲು ತನಗೆ ಅಧಿಕಾರವಿದೆಯೆಂಬುದಾಗಿ ಅಲ್ಲಿಯ ಸರ್ವೋಚ್ಚ ನ್ಯಾಯಲಯ ದೃಢೀಕರಿಸಿದಾಗ ಇನ್ನೂ ತೊಡಕುಂಟಾಯಿತು. ಇದರಿಂದಾಗಿ ನ್ಯಾಯಿಕ ಪರಮಾಧಿಕಾರದ ಪರಿಕಲ್ಪನೆಯ ಸ್ಥಾಪನೆಯಾಗಲಿಲ್ಲವಾದರೂ, ಮೂಲಭೂತ ದಾಖಲೆಯಾದ ಸಂವಿಧಾನದಲ್ಲೇ ಪರಮಾಧಿಕಾರ ನಿಹಿತವಾಗಿದೆಯೆಂದು ತೋರಿಬಂತು. ಇದು ಇನ್ನೂ ಸಂಕೀರ್ಣವಾಗಿತ್ತು. ಸಂವಿಧಾನದಲ್ಲಿ ಬದಲಾವಣೆಗಳನ್ನು ಸೂಚಿಸಲು ಹಾಗೂ ಅವಕ್ಕೆ ಸಮ್ಮತಿ ನೀಡಲು ಅಮೆರಿಕನ್ ಕಾಂಗ್ರೆಸ್ಸಿಗೇ ಅಲ್ಲದೆ ವಿವಿಧ ರಾಜ್ಯಗಳಿಗೂ ಆ ಉದ್ದೇಶದಿಂದ ಕರೆಯಲಿದ್ದ ವಿಶಿಷ್ಟ. ಸಮಾವೇಶಗಳಿಗೂ ಅಧಿಕಾರ ಇದೆಯೆಂಬ ಸಂಗತಿಯಿಂದಾಗಿ ಸಂವೈಧಾನಿಕ ಪರಮಾಧಿಕಾರದ ಈ ಪದ್ಧತಿ ಇನ್ನೂ ಹೆಚ್ಚು ತೊಡಕಿನದಾಗಿ ಪರಿಣಮಿಸಿತ್ತು. ಸಂವಿಧಾನದ ಅಡಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ವಹಿಸದಿರುವ ಅಥವಾ ಅದರಿಂದ ಅಭಿವ್ಯಕ್ತವಾಗಿ ನಿಷಿದ್ಧಗೊಳ್ಳದಿರುವ ಅಧಿಕಾರಗಳನ್ನೂ ಪ್ರಜೆಗಳು ಉಳಿಸಿಕೊಂಡಿರುವುದಾಗಿಯೂ ವಾದಿಸಬಹುದು. ಆದ್ದರಿಂದ ಜಟಿಲವಾದ ಸಂಯುಕ್ತ ವ್ಯವಸ್ಥೆಯಲ್ಲಿ ಪರಮಾಧಿಕಾರ ಏಕೈಕವಾಗಿ ಇರುವುದು ಎಲ್ಲಿ ಎಂಬುದನ್ನು ನಿರ್ಧರಿಸುವುದು ಕಠಿಣವಾಗಿತ್ತು. ಒಕ್ಕೂಟ ಮತ್ತು ರಾಜ್ಯಗಳ ದ್ವಿಪರಮಾಧಿಕಾರದ ಪರಿಕಲ್ಪನೆಗೆ ಸೈದ್ಧಾಂತಿಕ ನೆಲೆ ದೊರಕಿತು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರಜೆಗಳಲ್ಲಿ ಪರಮಾಧಿಕಾರ ನಿಹಿತವಾಗಿದೆಯೆಂಬ ಸಿದ್ಧಾಂತವನ್ನು ಒಂದು ವೇಳೆ ಒಪ್ಪಿಕೊಂಡರೂ, ರಾಷ್ಟ್ರೀಯ ಸರ್ಕಾರವೊಂದೇ ಪ್ರಜೆಗಳ ಪರವಾಗಿ ಪರಮಾಧಿಕಾರವನ್ನು ಚಲಾಯಿಸಬೇಕಾದ್ದಿಲ್ಲವೆಂದೂ ಕೇಂದ್ರ ಮತ್ತು ರಾಜ್ಯಗಳ ನಡುವೆ ಅದನ್ನು ಕಾರ್ಯಭಾರಾತ್ಮಕವಾಗಿ ವಿಂಗಡಿಸಬಹುದೆಂದೂ ವಾದಿಸಬಹುದು.

	ಪ್ರತಿಯೊಂದು ರಾಜ್ಯದಲ್ಲೂ ಅಲ್ಲಿಯ ಸರ್ಕಾರದ ಮೇಲೆ ಪ್ರಭಾವ ಹೊಂದಿರುವ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕವೇ ಮೊದಲಾದ ಗುಂಪುಗಳು ಪರಮಾಧಿಕಾರ ಚಲಾಯಿಸುತ್ತವೆ ಎಂಬ ಬಹುತ್ವವಾದಿ ಸಿದ್ಧಾಂತ 20ನೆಯ ಶತಮಾನದಲ್ಲಿ ರೂಪುಗೊಂಡಿತು. ರಾಜ್ಯದ ಪರಮಾಧಿಕಾರಸಿದ್ಧಾಂತಕ್ಕೆ ಅದರ ಒಳಗಿನಿಂದಲೇ ಸಂಭವಿಸಿದ ದಾಳಿ ಇದು. ಪ್ರತಿಯೊಂದು ಸಮಾಜದಲ್ಲೂ ಪರಮಾಧಿಕಾರ ಒಂದು ನಿರ್ದಿಷ್ಟ ಸ್ಥಳದಲ್ಲಿ ನೆಲಸಿರುವುದಿಲ್ಲ. ಒಂದು ಗುಂಪಿನಿಂದ ಇಲ್ಲವೇ ಹಲವು ಗುಂಪುಗಳ ಸಮೂಹದಿಂದ ಇನ್ನೊಂದು ಗುಂಪು ಅಥವಾ ಸಮೂಹಕ್ಕೆ ಅದು ಸತತವಾಗಿ ಬದಲಾಯಿಸುತ್ತಿರುತ್ತದೆ ಎಂದು ಈ ಸಿದ್ಧಾಂತ ಹೇಳುತ್ತದೆ. ಸಾಮಾಜಿಕ ಐಕಮತ್ಯದ ಹಲವಾರು ನಿದರ್ಶನಗಳಲ್ಲಿ ರಾಜ್ಯವೂ ಒಂದು ; ಸಮಾಜವಾದ ಇತರ ಘಟಕಗಳೊಡನೆ ಅದನ್ನು ಹೋಲಿಸಿದಾಗ ಅದು ವಿಶೇಷ ಅಧಿಕಾರ ಹೊಂದಿಲ್ಲ-ಎಂದು ವಾದಿಸುವವರೆಗೂ ಈ ಸಿದ್ಧಾಂತ ಮುಂದುವರಿಯಿತು.

	ರಾಜ್ಯಗಳ ಆಂತರಿಕ ವಿಕಾಸದ ಮೇಲೆ ಪರಿಮಾಧಿಕಾರ ಸಿದ್ಧಾಂತದಿಂದ ಬಹಳ ಪರಿಣಾಮ ಉಂಟಾಗಿದೆಯಾದರೂ, ರಾಜ್ಯಗಳ ನಡುವಣ ಸಂಬಂಧದ ಮೇಲೆ ಅದರ ಪ್ರಭಾವ ವಿಶೇಷವಾದ್ದು. ಕಾನೂನುಗಳನ್ನು ಮಾಡುವ ಪ್ರಭು ಆ ಕಾನೂನುಗಳಿಗೆ ಬದ್ಧನಾಗಿರುವುದಿಲ್ಲವೆಂದು ಬೋಡಿನ್ ಹೇಳಿದಾಗಿನಿಂದಲೂ (1576) ಈ ತೊಡಕು ಬೆಳೆದುಬಂದಿದೆ. ಪ್ರಭುವಾದವನು ಯಾರಿಗೂ ಹೊಣೆಯಲ್ಲ ; ಯಾವ ಕಾನೂನುಗಳಿಗೂ ಬದ್ಧನಲ್ಲ -ಎಂಬುದಾಗಿ ಇದನ್ನು ವ್ಯಾಖ್ಯಾನಿಸಲಾಗಿದೆ. ಆದರೆ ಬೋಡಿನ್ನನ ಕೃತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ಭಾವನೆಗೆ ಸಮರ್ಥನೆ ದೊರಕುವುದಿಲ್ಲ. ದೈವ ನಿಯಾಮಕ, ಪ್ರಕೃತಿ ನಿಯಮ ಅಥವಾ ತರ್ಕಸಮ್ಮತಿ, ಸರ್ವರಾಷ್ಟ್ರಗಳಿಗೂ ಸಮಾನವಾದ ಕೆಲವು ನ್ಯಾಯಗಳು, ಪ್ರಭು ಯಾರೆಂಬುದನ್ನೂ ಉತ್ತರಾಧಿಕಾರವನ್ನೂ ನಿರ್ಣಯಿಸುವ ಹಾಗೂ ಪರಮಾಧಿಕಾರದ ಇತಿಮಿತಿಗಳನ್ನು ಕುರಿತ ಶಾಸನಗಳು-ಇವುಗಳಿಂದ ಉದ್ಭೂತವಾದ ಕೆಲವು ಮೂಲ ಭೂತ ಸೂತ್ರಗಳಿಗೆ ಪ್ರಭು ಬದ್ಧನಾಗಿರುತ್ತಾನೆಂದು ಬೋಡಿನ್ ಒತ್ತಿ ಹೇಳಿದ್ದಾನೆ. ಆದ್ದರಿಂದ ಬೋಡಿನ್ನನ ಪ್ರಕಾರ ಪ್ರಭು ನಿರಂಕುಶನಲ್ಲ. ರಾಜ್ಯದ ಸಂವಿಧಾನನ್ಯಾಯದಿಂದಲೂ, ಪ್ರತಿಯೊಬ್ಬ ಮಾನವನನ್ನೂ ಬದ್ಧಗೊಳಿಸುವುದಾಗಿ ನಂಬಲಾಗಿದ್ದ ಉನ್ನತನ್ಯಾಯದಿಂದಲೂ ಪ್ರಭು ನಿರ್ಬಂಧಿತನಾಗಿರುತ್ತಾನೆಂಬುದು ಬೋಡಿನ್ನನ ಮತ. ರಾಜ್ಯವನ್ನು ಬದ್ಧಗೊಳಿಸುವ ಅನೇಕ ಸೂತ್ರಗಳನ್ನು ಅನಂತರ ಅಂತರಾಷ್ಟ್ರೀಯ ಕಾನೂನಿಗೆ ಸೇರಿಸಲ್ಪಟ್ಟುವು. ಆದಾಗ್ಯೂ ಬೋಡಿನ್ನನ ಸಿದ್ಧಾಂತಗಳನ್ನು ಆಂತರಿಕ ನಿರಂಕುಶಾಧಿಕಾರಕ್ಕೆ ಹಾಗೂ ಅಂತರಾಷ್ಟ್ರೀಯ ಅರಾಜಕತೆಗೆ ಸಮರ್ಥನೆಯಾಗಿ ಅನೇಕರು ಮುಂದೊಡ್ಡಿದ್ದಾರೆ.

	ತಾಮಸ್ ಹಾಬ್ಸ್ ಈ ವಿಚಾರವನ್ನು ಅದರ ತುದಿ ಮುಟ್ಟಿಸಿದ. ಪ್ರಭುವನ್ನು ಅವನು ನ್ಯಾಯಕ್ಕಿಂತ ಬಲಿಷ್ಠತೆಯೊಂದಿಗೆ ಸಮೀಕರಿಸಿದ. ನ್ಯಾಯವೆಂಬುದು ಪ್ರಭುವಿನ ಆದೇಶದ ಪ್ರತೀಕ. ಅದು ಅವನ ಅಧಿಕಾರವನ್ನು ಸೀಮಿತಗೊಳಿಸಲಾರದು. ಪ್ರಭುವಿನ ಅಧಿಕಾರ ನಿರಂಕುಶವಾದ್ದು.- ಮಾನವರು ಎಷ್ಟರಮಟ್ಟಿಗೆ ನಿರಂಕುಶತೆಯನ್ನು ಕಲ್ಪಿಸಿಕೊಳ್ಳಬಲ್ಲರೊ ಅಷ್ಟೂ ಅಷ್ಟು ನಿರಂಕುಶವಾದ್ದು, ಉಪಾಧಿರಹಿತವಾದ್ದು- ಎಂದು ಹಾಬ್ಸ್ ಹೇಳಿದ.

	ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಇದು ಸತತ ಯುದ್ಧಾವಸ್ಥೆಗೆ ಎಡೆ ಕೊಟ್ಟಿತು. ಒಬ್ಬ ಪ್ರಭು ಇತರ ಪ್ರಭುಗಳ ಮೇಲೆ ತನ್ನ ಅಧಿಕಾರ ಸ್ಥಾಪಿಸಲು ಯತ್ನಿಸುತ್ತಿದ್ದ. ಇದಕ್ಕಾಗಿ ಬಲ ಪ್ರಯೋಗಿಸುತ್ತಿದ್ದ. ಅನಂತರದ ಎರಡು ಶತಮಾನಗಳಲ್ಲಿ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಮುಂದುವರಿಯಿತು. ಪ್ರತಿಯೊಬ್ಬ ಪ್ರಭುವೂ ತನ್ನ ಪ್ರಜೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನಡೆಸಿಕೊಳ್ಳುತ್ತಿದ್ದ. ತನ್ನ ಕ್ರಮಗಳಿಂದ ಇತರ ರಾಜ್ಯಗಳ ಮೇಲೆ ಆಗಬಹುದಾದ ಪರಿಣಾಮಗಳನ್ನು ಲೆಕ್ಕಿಸದೆ ಅವರ ಆರ್ಥಿಕ ಜೀವನದ ಮೇಲೆ ಹಸ್ತಕ್ಷೇಪ ಮಾಡುತ್ತಿದ್ದ.

	ಈ ವಿಚಾರದಲ್ಲಿ ರಾಜ್ಯಗಳ ಸ್ವತಂತ್ರ್ಯದ ಮೇಲೆ ಅನೇಕ ನಿರ್ಬಂಧಗಳು 20ನೆಯ ಶತಮಾನದಲ್ಲಿ ಜಾರಿಗೆ ಬಂದುವು. ಭೂಮಿ ಹಾಗೂ ಸಮುದ್ರಗಳ ಮೇಲೆ ಯುದ್ಧಗಳ ನಡವಳಿಕೆಯನ್ನು ನಿರೂಪಿಸುವ ಅನೇಕ ನಿಯಮಗಳು 1899 ಮತ್ತು 1907ರ ಹೇಗ್ ಸಮ್ಮೇಳನದಲ್ಲಿ ರೂಪಿತವಾದುವು. ಯುದ್ಧ ಮಾಡುವ ಹಕ್ಕನ್ನು ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಕರಾರುಗಳಲ್ಲಿ ಮೊಟಕುಮಾಡಲಾಗಿದೆ. ಅಂತರಾಷ್ಟ್ರೀಯ ವಿವಾದಗಳನ್ನು ಬಗೆಹರಿಸಲು ಯುದ್ಧ ಮಾಡುವುದಾಗಲಿ, ಯುದ್ಧವನ್ನು ರಾಷ್ಟ್ರೀಯ ನೀತಿಯ ಸಾಧನವಾಗಿ ಬಳಸಿಕೊಳ್ಳುವುದಾಗಲಿ ತಪ್ಪೆಂದು ಬ್ರಿಯಂಡ್-ಕೆಲಾಂಗ್ ಒಪ್ಪಂದದಲ್ಲಿ (1928) ಖಂಡಿಸಲಾಗಿದೆ. ವಿಶ್ವಸಂಸ್ಥೆಯ ಪ್ರಣಾಳಿಕೆಯಲ್ಲೂ ಇವಕ್ಕೆ ಅಭಿವ್ಯಕ್ತಿ ನೀಡಲಾಗಿದೆ. ರಾಷ್ಟ್ರಗಳು ತಮ್ಮ ನಡುವಣ ವ್ಯಾಜ್ಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ; ಇವುಗಳಿಂದ ಶಾಂತಿ ಭದ್ರತೆ ನ್ಯಾಯಗಳಿಗೆ ಧಕ್ಕೆ ಒದಗಬಾರದು ಎಂದು ಹೇಳಲಾಗಿದೆ. ಎಲ್ಲ ಸದಸ್ಯ ರಾಷ್ಟ್ರಗಳೂ ಸಮಾನವಾದ ಪರಮಾಧಿಕಾರ ಹೊಂದಿವೆಯೆಂದೂ ಪ್ರಣಾಳಿಕೆ ಹೇಳುತ್ತದೆ. ಪರಮಾಧಿಕಾರವೆಂದರೆ ಅನಿರ್ಬಂಧವಾದ ಅಧಿಕಾರ ಎಂಬ ಭಾವನೆಗೆ ಇಂದು ಪುರಸ್ಕಾರವಿಲ್ಲ. ಎಲ್ಲ ರಾಜ್ಯಗಳೂ ಸಮವಾದ್ದರಿಂದ ಒಂದು ರಾಜ್ಯದ ಇನ್ನೊಂದರ ಮೇಲೆ ತನ್ನ ಇಚ್ಛೆಯನ್ನು ಹೇರುವಂತಿಲ್ಲ. ಪ್ರತಿಯೊಂದು ರಾಜ್ಯದ ಪರಮಾಧಿಕಾರವನ್ನೂ ರಕ್ಷಿಸುವುದು ಅಂತರಾಷ್ಟ್ರೀಯ ಸಮುದಾಯದ ಕರ್ತವ್ಯವಾಗಿದೆ. ಇದರ ನಿರ್ವಹಣೆಯಲ್ಲಿ ಅನೇಕ ಲೋಪದೋಷಗಳು ಕಂಡುಬಂದಿವೆಯಾದರೂ ಇದನ್ನು ತತ್ತ್ವಶಃ ಒಪ್ಪಲಾಗಿದೆ ಪ್ರಜಾಪ್ರಭುತ್ವವಾದಿ ಸರ್ಕಾರದ ಬೆಳವಣಿಗೆಯಿಂದಾಗಿ ಪರಮಾಧಿಕಾರ ಹಾಗೂ ಆಡಳಿತವರ್ಗಗಳ ಮೇಳೆ ಹಲವು ನಿರ್ಬಂಧಗಳು ಏರ್ಪಟ್ಟಿವೆ. ಬಲವಿದ್ದಲ್ಲಿ ಅಧಿಕಾರ ಎಂಬ ಸೂತ್ರಕ್ಕೆ ರಾಜ್ಯಗಳ ಪರಸ್ಪರ ಅವಲಂಬನೆಯೂ ಅಡ್ಡಿಯಾಗಿದೆ. ನ್ಯಾಯವಿಲ್ಲದೆ ಶಾಂತಿಯಿಲ್ಲ, ಪರಮಾಧಿಕಾರಕ್ಕೆ ಸೀಮಿತಗಳನ್ನೊಡ್ಡದಿದ್ದರೆ ನ್ಯಾಯವಿಲ್ಲ-ಎಂಬುದನ್ನು ಜನಾಂಗಗಳು ಅರಿತುಕೊಂಡಿವೆ. ಆದ್ದರಿಂದ ಶಾಂತಿಪಾಲನೆಗೆ ಅಗತ್ಯವೆನಿಸುವ ಮಟ್ಟಿಗೆ ಅವು ತಮ್ಮ ಪರಮಾಧಿಕಾರವನ್ನು ರಾಷ್ಟ್ರಗಳು ಮಾತ್ರವೇ ಅಲ್ಲದೆ ಪ್ರಪಂಚ ಸಮುದಾಯವೂ ಚಲಾಯಿಸತೊಡಗಿದೆ. ಸಂಯುಕ್ತ ರಾಜ್ಯಗಳಲ್ಲಿ ಮೊಟ್ಟಮೊದಲು ರೂಪಿಸಲಾದ ವಿಭಜಿತ ಪರಮಾಧಿಕಾರ ತತ್ತ್ವವನ್ನು ಈಗ ಅಂತರಾಷ್ಟ್ರೀಯ ವಲಯಕ್ಕೂ ಅನ್ವಯಿಸಲಾಗುತ್ತಿದೆ.										(ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ